ಟ್ಯೂಡರ್ -
	1485-1603ರಲ್ಲಿ ಇಂಗ್ಲೆಂಡನ್ನಾಳಿದ ರಾಜವಂಶ. 7ನೆಯ ಹೆನ್ರಿ (1485-1509), 8ನೆಯ ಹೆನ್ರಿ (1509-1547), 6ನೆಯ ಎಡ್ವರ್ಡ್ (1547-1553), ಜೇನ್ ಗ್ರೇ ( ಜುಲೈ 6-19, 1553), 1ನೆಯ ಮೇರಿ (1553-1558), 1ನೆಯ ಎಲಿಜûಬೆತ್ (1558-1603)-ಈ ಆರ್ವರು ಈ ಅವಧಿಯಲ್ಲಿ ಆಳ್ವಿಕೆ ನಡೆಸಿದ ಟ್ಯೂಡರ್ ವಂಶೀಯರು. ಇವರ ಆಳ್ವಿಕೆಯಿಂದ ಇಂಗ್ಲೆಂಡಿನ ಇತಿಹಾಸದಲ್ಲಿ ಆಧುನಿಕ ಕಾಲ ಆರಂಭವಾಗುತ್ತದೆ. ಇವರದು. ಉತ್ತರ ವೇಲ್ಸಿನ ಗ್ವಿನೆಡ್‍ನ ಪ್ರಾಚೀನ ವೆಲ್ಷ್ ಮನೆತನ. 5ನೆಯ ಹೆನ್ರಿಯ ಕೆಳಗೆ ಈ ವಂಶದ ಓವೆನ್ ಟ್ಯೂಡರ್ ಅಧಿಕಾರಕ್ಕೆ ಸೇರಿದಾಗ ಟ್ಯೂಡರುಗಳು ಇಂಗ್ಲೆಂಡಿನ ರಾಷ್ಟ್ರೀಯ ಇತಿಹಾಸವನ್ನು ಪ್ರವೇಶಿಸಿದರು. ಹೆನ್ರಿಯ ವಿಧವೆ ಕ್ಯಾದರೀನಳನ್ನು ಒವೆನ್ ಟ್ಯೂಡರ್ 1429ರಲ್ಲಿ ಮದುವೆಯಾದ. ಗುಲಾಬಿಗಳ ಯುದ್ಧಗಳ ಕಾಲದಲ್ಲಿ ಯಾರ್ಕಿಸ್ಟರು ಇವನನ್ನು ಕೊಂದರು (1461). ಓವೆನ್ ಟ್ಯೂಡರನಿಗೆ ಕ್ಯಾದರೀನಗಳಲ್ಲಿ ಎಡ್ಮಂಡ್ ಮತ್ತು ಜ್ಯಾಸ್ಫರ್ ಎಂಬ ಇಬ್ಬರು ಗಂಡುಮಕ್ಕಳಾದರು. 1453ರಲ್ಲಿ ಇವರು ರಿಚ್ಮಂಡ್ ಮತ್ತು ಪೆಂಬ್ರೋಕ್ ಅರ್ಲ್‍ಗಳಾದರು. ಗಾಂಟ್‍ನ ಜಾನನ ಮರಿಮಗಳಾದ ಮಾರ್ಗರೆಟ್ ಬ್ಯೂಫರ್ಟಳನ್ನು ಎಡ್ಮಂಡ್ ಟ್ಯೂಡರ್ ಮದುವೆಯಾದ. ಇವರ ಮಗನೇ 7ನೆಯ ಹೆನ್ರಿ. ಟ್ಯೂಡರರಿಗೆ ಸಿಂಹಾಸನ ಪಡೆಯಲು ಸಾಕಷ್ಟು ಹಕ್ಕು ಇತ್ತು. ಇದನ್ನು ಭದ್ರಗೊಳಿಸಲು ಕಾರಣವಾದ ಸಂಗತಿಗಳು ಎರಡು: ಗುಲಾಬಿಗಳ ಯುದ್ಧಗಳ ಪರಣಾಮವಾಗಿ ಲ್ಯಾಂಕ್ಯಾಸ್ಟರ್ ಮತ್ತು ಯಾರ್ಕ್ ಮನೆತನಗಳೆರಡೂ ನಾಶವಾಗಿದ್ದುವು. 7ನೆಯ ಹೆನ್ರಿ ಸಮರ್ಥನೆಂದು ಹೆಸರು ಗಳಿಸಿದ್ದ. ಅವನು ಬಲಪ್ರಯೋಗದಿಂದ ಸಿಂಹಾಸನವನ್ನು ಗಳಿಸಿದನಾದರೂ, ಜಾಣ್ಮೆಯಿಂದಲೂ ಯಥೋಚಿತ ಅಧಿಕಾರ ಚಲಾವಣೆಯಿಂದಲೂ ಅದನ್ನು ಉಳಿಸಿಕೊಂಡ. 7ನೆಯ ಹೆನ್ರಿಯ ಅನಂತರ ಅವನ ಮಗ 8ನೆಯ ಹೆನ್ರಿ ಪಟ್ಟಕ್ಕೆ ಬಂದ. ಇವನ ಕಾಲದಲ್ಲಿ ಧಾರ್ಮಿಕ ಸುಧಾರಣೆಗಳಾದವು. ಇಂಗ್ಲೆಂಡು ರೋಮನ್ ಚರ್ಚಿನೊಡನೆ ಎಲ್ಲ ಸಂಪರ್ಕವನ್ನೂ ಕಡಿದುಕೊಂಡು, ತನ್ನದೇ ಆದ ಚರ್ಚನ್ನು ಸ್ಥಾಪಿಸಿಕೊಂಡಿತು. 8ನೆಯ ಹೆನ್ರಿಯ ಆಳ್ವಿಕೆಯಾದ ಮೇಲೆ ಅವನ ಮಕ್ಕಳಾದ 6ನೆಯ ಎಡ್ವರ್ಡ್, 1ನೆಯ ಮೇರಿ ಮತ್ತು 1ನೆಯ ಎಲಿಜûಬೆತ್ ಅನುಕ್ರಮವಾಗಿ ಆಳ್ವಿಕೆ ನಡೆಸಿದರು. ಎಲಿಜûಬೆತಳ ಕಾಲದಲ್ಲಿ ಇಂಗ್ಲೆಂಡ್ ಪ್ರಬಲವಾದ ರಾಷ್ಟ್ರವಾಗಿ ಬೆಳೆಯಿತು. ಕಲೆ-ಸಾಹಿತ್ಯಕ್ಷೇತ್ರಗಳಲ್ಲಿ ಪ್ರಗತಿಯುಂಟಾಯಿತು. ವಿಲಿಯಂ ಷೇಕ್ಸಪಿಯರ್ ಈ ಕಾಲದ ಪ್ರಖ್ಯಾತ ನಾಟಕಕಾರ. ಹೋಲ್‍ಬೈನ್, ಡುರರ್ ಎಂಬ ಪ್ರಸಿದ್ಧ ಚಿತ್ರಕಾರರು ಮತ್ತು ಟ್ಯಾಲಿಸ್, ಬರ್ಡ್ ಗಿಬನ್ಸ್ ಎಂಬ ಸಂಗೀತಗಾರರು ಟ್ಯೂಡರ್ ವಂಶದವರ ಆಳ್ವಿಕೆಯ ಕಾಲದಲ್ಲಿ ಜೀವಿಸಿದ್ದರು. ಟ್ಯೂಡರ್‍ಗಳು ಪಾರ್ಲಿಮೆಂಟನ್ನು ಹತ್ತಿಕ್ಕಲಿಲ್ಲ. ಅದಕ್ಕೆ ಪರಂಪರಾಗತವಾಗಿ ಸಲ್ಲಬೇಕಾಗಿದ್ದ ಮರ್ಯಾದೆಯನ್ನು ಸಲ್ಲಿಸಿದರು. ರಾಣಿ ಎಲೆಜûಬೆತ್ ಅವಿವಾಹಿತಳಾಗಿದ್ದುದರಿಂದ ಅವಳೊಂದಿಗೆ ಆ ವಂಶದ ಆಳ್ವಿಕೆ ಕೊನೆಗೊಂಡಿತು. ಅನಂತರ ಸ್ಟ್ಯೂಯರ್ಟ್ ವಂಶದವರು ಅಧಿಕಾರಕ್ಕೆ ಬಂದರು.						(ಕೆ.ಎಸ್.ಎಸ್.)
</poem>